ಬೇಡಿ, ರಾಜೇಂದ್ರ ಸಿಂಗ್
1915. ಪ್ರಸಿದ್ಧ ಉರ್ದು ಲೇಖಕರು. ಲಾಹೋರಿನಲ್ಲಿ ಅಕ್ಟೋಬರ್ 1915ರಂದು ಜನಿಸಿದರು. ಇವರ ಮಾತೃಭಾಷೆ ಪಂಜಾಬಿ. ಕೆಲಕಾಲ ಇವರು ಅಂಚೆ ವಿಭಾಗದಲ್ಲಿ ಕಾರಕೂನರಾಗಿ ಕೆಲಸ ಮಾಡಿದರು. ಸ್ವಲ್ಪಕಾಲ ಜಮ್ಮುವಿನ ಆಕಾಶವಾಣಿ ಕೇಂದ್ರದಲ್ಲಿ ನಿಲಯ ನಿರ್ದೇಶಕರಾಗಿದ್ದರು.

	ಬೇಡಿಯವರು ಪಂಜಾಬಿ, ಹಿಂದಿ, ಉರ್ದು-ಈ ಮೂರು ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಪಂಜಾಬಿಯಲ್ಲಿರುವ `ಹದ್ದಿಯಾನ್ ತೇ ಫೂಲ್ ಎಂಬ ಕಥಾಸಂಕಲನ 1944ರಲ್ಲಿ ಪ್ರಕಟವಾಯಿತು. ಹಿಂದಿಯಲ್ಲಿರುವ `ತುಲಾದಾನ್ ಎಂಬ ಕೃತಿ 1945ರಲ್ಲಿ ಪ್ರಕಟವಾಯಿತು. ಪಂಜಾಬಿ ಮತ್ತು ಹಿಂದಿಗಿಂತಲೂ ಉರ್ದು ಸಾಹಿತ್ಯದಲ್ಲಿ ಇವರು ಹೆಚ್ಚು ಪ್ರಖ್ಯಾತರಾಗಿದ್ದಾರೆ. ಚಾನಾ-ಓ-ದಾಮ್ (1938) ಗರಹನ್ (1941) ಕೋಖಜಲೀ (1949) ಅಪ್ನ ದುಃಖ್ ಮುಝೇ ದೇ ದೋ (1965) ಹಾಥ್ ಹಮಾರ್ ಕಲಮ್ ಹುವೆ (1974), ಲಂಬೀ ಲಡಕೀ ಲಾಜವಂತೀ-ಇವು ಬೇಡಿಯವರ ಪ್ರಮುಖ ಕಥಾಸಂಕಲನಗಳು. ಉನ್ನತ ಶ್ರೇಣಿಯ ಕಥೆಗಾರರೆಂದು ಪರಿಗಣಿತವಾಗಿರುವ ಇವರ ಕಥೆಗಳಲ್ಲಿ ಕಲೆ ಮತ್ತು ವಿಚಾರದ ಅಭೂತಪೂರ್ವ ಹೊಂದಾಣಿಕೆ ಮೇಳೈಸಿದೆ. ಸುಖ ಮತ್ತು ಮಧುರ ಸ್ವಪ್ನಗಳನ್ನು ಭಗ್ನಗೊಳಿಸುವ ಮಾನವ ಜೀವನದ ಸಮಸ್ಯೆಗಳನ್ನು ಬೇಡಿ ತಮ್ಮ ಕತೆಗಳಲ್ಲಿ ಚರ್ಚಿಸಿದ್ದಾರೆ; ಮಾನವನ ಆಂತರಿಕ ದುಃಸ್ಥಿತಿ ಮತ್ತು ಹಾಸ್ಯಜನಕಸ್ಥಿತಿಯಲ್ಲಿ ಪರ್ಯವಸನಗೊಳ್ಳುತ್ತಿರುವ ಬಾಹ್ಯ ಜೀವನವನ್ನು ಚಿತ್ರಿಸಿದ್ದಾರೆ. ಬೇಜಾನ್ ಬೀಜೇ (1943), ಸಾತ್ ಖೇಲ್ (1961)-ಈ ಎರಡು ಕೃತಿಗಳಲ್ಲಿ ಇವರ ನಾಟಕಗಳು ಸಂಕಲಿತವಾಗಿವೆ. 

	ಎಕ್ ಚಾದರ್ ಮೈಲಿ ಸೀ (1962) ಬೇಡಿಯವರ ಪ್ರತ್ಯೇಕ ಕಾದಂ¨ರಿ. ಮಾಯಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿ ಜನಪ್ರಿಯತೆಯನ್ನು ಗಳಿಸಿದ ಈ ಕೃತಿ ಉರ್ದು ಸಾಹಿತ್ಯದ ಉತ್ಕøಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಇದರಲ್ಲಿ ಪಂಜಾಬಿನ ಒಂದು ಹಳ್ಳಿಯ ಬದುಕಿನ ನೈಜ ಚಿತ್ರಣ ಜೀವಂತವಾಗಿ ದಾಖಲಾಗಿದೆ. ಉರ್ದು ಸಾಹಿತ್ಯದ ಪ್ರಸಿದ್ಧ ವಿಮರ್ಶಕರೆಲ್ಲ ಈ ಕೃತಿಯನ್ನು ಮನಸಾರೆ ಪ್ರಶಂಸಿದ್ದಾರೆ. ಇದಕ್ಕೆ 1965ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ಈ ಕಾದಂಬರಿ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಲ್ಲಿ ಒಂದು ಮಲಿನ ಚಾದರ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

	ಈಗ ಮುಂಬಯಿಯಲ್ಲಿ ನೆಲೆಸಿರುವ ಬೇಡಿ ನಿರ್ದೇಶಕರಾಗಿ, ಚಿತ್ರ ಕಥೆಗಾರರಾಗಿ ಚಲನಚಿತ್ರರಂಗದಲ್ಲಿಯೂ ದೊಡ್ಡ ಹೆಸರು ಮಾಡಿದ್ದಾರೆ. ಗೌತಮ್ ಕೋಟ್ ಎಂಬ ಚಿತ್ರ ನಿರ್ಮಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಇವರು ರಾಷ್ಟ್ರಪತಿ ಪುರಸ್ಕಾರ ಪಡೆದ ಮಿರ್ಜಾ ಗಾಲಿಬ್ ಮತ್ತು ಅನುರಾಧಾ ಎಂಬ ಚಲನಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ.	
(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ